ಮಿನಿಸೋಟ
ಅಮೆರಿಕ ಸಂಯುಕ್ತ ಸಂಸ್ಥಾನದ ಉತ್ತರದಂಚಿನಲ್ಲಿರುವ ಒಂದು ರಾಜ್ಯ. ಉತ್ತರಕ್ಕೆ ಕೆನಡ, ಪೂರ್ವಕ್ಕೆ ವಿಸ್ಕಾನ್‍ಸಿನ್ ಮತ್ತು ಸುಪೀರಿಯರ್ ಸರೋವರ ದಕ್ಷಿಣಕ್ಕೆ ಅಯೋವ ಮತ್ತು ಪಶ್ಚಿಮಕ್ಕೆ ಉತ್ತರ ಮತ್ತು ದಕ್ಷಿಣ ಡಕೋಟದಿಂದ ಸುತ್ತುವರಿದಿದ್ದು ಉ.ಅ. 40o 30'-49o 23' ಪ. ರೇ. 83o 23'-97o 13' ನಲ್ಲಿದೆ. ಸುಪೀರಿಯರ್ ಸರೋವರದ 5729 ಚಕಿಮೀ ಪ್ರದೇಶವನ್ನು ಬಿಟ್ಟು ಒಳಜಲಪ್ರದೇಶಗಳೂ ಸೇರಿದಂತೆ ಈ ರಾಜ್ಯದ ವಿಸ್ತೀರ್ಣ 217,735 ಚಕಿಮೀ. ಜನಸಂಖ್ಯೆ 41,45,667(1983). ರಾಜಧಾನಿ ಸೇಂಟ್‍ಪಾಲ್, ಜನಸಂಖ್ಯೆ 270,230(1980).

	ಮೇಲ್ಮೈಲಕ್ಷಣ:  ರಾಜ್ಯದ ಪೂರ್ವಕ್ಕೆ ಸೇಂಟ್ ಕ್ರಾಯ್ ಮತ್ತು ಮಿಸಿಸಿಪಿ ನದಿಗಳು, ಪಶ್ಚಿಮಕ್ಕೆ ಬಿಗ್‍ಸ್ಟೋನ್, ಟ್ರಾವರ್ಸ್ ಸರೋವರಗಳು ಮತ್ತು ರೆಡ್ ನದಿ, ಉತ್ತರಕ್ಕೆ ಉಡ್ಸ್ ಮತ್ತು ರೈನಿ ಸರೋವರಗಳು ಈ ರಾಜ್ಯದ ಗಡಿಗಳಾಗಿವೆ. ಮಿನಿಸೋಟ ಉತ್ತರ ದಕ್ಷಿಣವಾಗಿ 661 ಕಿಮೀ, ಪೂರ್ವಪಶ್ಚಿಮವಾಗಿ 575 ಕಿಮೀ ಅಗಲವಾಗಿದೆ. ಕುಕ್ ಕೌಂಟಿಯಲ್ಲಿರುವ ಈಗಲ್ ಪರ್ವತ ಶಿಖರ ಸಮುದ್ರಮಟ್ಟದಿಂದ 701 ಮೀ ಎತ್ತರವಿದೆ. ಸುಪೀರಿಯರ್ ಸರೋವರ ಪ್ರದೇಶದ 183 ಮೀಟರ್ ಎತ್ತರವಿರುವುದೇ ಈ ರಾಜ್ಯದ ಬಹು ತಗ್ಗುಪ್ರದೇಶವಾಗಿದೆ. ಮೆಸುಬಿ, ಮಿಸ್ಕಾ ಬೆಟ್ಟಶ್ರೇಣಿ ಎತ್ತರ ಪ್ರದೇಶಗಳು. ಈ ರಾಜ್ಯದ ನೈರುತ್ಯಕ್ಕೆ ಅನೇಕ ಸರೋವರಗಳಿಂದ ಕೂಡಿದ ಪ್ರೇರಿ ಹುಲ್ಲುಗಾವಲು, ನದಿಗಳೂ. ಈಶಾನ್ಯಕ್ಕೆ ದಟ್ಟವಾದ ಕಾಡುಗಳು ಇವೆ. ಮಿನಿಸೋಟದ ಮಧ್ಯಭಾಗದಲ್ಲಿ ಮಿಸಿಸಿಪಿ ನದಿಯ ಪಶ್ಚಿಮಕ್ಕೆ ಬಿಗ್‍ವುಡ್ಸ್ ಅರಣ್ಯ ಪ್ರದೇಶವಿದೆ.

	ನದಿ ಸರೋವರ: ಮಿಸಿಸಿಪಿ, ಮಿನಿಸೋಟ, ರೆಡ್‍ಲೇಕ್, ರೈನಿ ಮತ್ತು ಸೇಂಟ್ ಲೂಯಿಸ್ ಪ್ರಮುಖ ನದಿಗಳು. ಮಿನಿಸೋಟದ ವೈಶಿಷ್ಟ್ಯವೆಂದರೆ ಸುಮಾರು 700ರಿಂದ 10,000 ಸರೋವರಗಳಿಂದ ಕೂಡಿರುವುದು. ರಾಜ್ಯದ ಉತ್ತರಕ್ಕೆ ಅಧಿಕ ಸಂಖ್ಯೆಯಲ್ಲಿ ಸರೋವರಗಳು ಇವೆ. ಇವುಗಳಲ್ಲಿ ಸುಪೀರಿಯರ್, ಬಿಗ್‍ಸ್ಟೋನ್, ಟ್ರಾವರ್ಸ್, ರೈನಿ, ಮಿನಿಟೊಂಕ ಮತ್ತು ರೆಡ್ ಸರೋವರಗಳು ಮುಖ್ಯವಾದವು.

	ವಾಯುಗುಣ: ಮಿನಿಸೋಟ ರಾಜ್ಯದಲ್ಲಿ ತೇವಾಂಶದ ಭೂಖಂಡ ವಾಯುಗುಣವಿದೆ. ಇಲ್ಲಿ ಬಿಸಿಲು ಕಡಿಮೆ. ಜನವರಿಯಲ್ಲಿ -13.3oಅ ಗೆ ಉಷ್ಣತೆ ಇಳಿದರೆ ಜುಲೈನಲ್ಲಿ 17.2oಅವರೆಗೆ ಉಷ್ಣತೆ ಇರುತ್ತದೆ. ಉತ್ತರದಲ್ಲಿ ದಕ್ಷಿಣಕ್ಕಿಂತ ಹೆಚ್ಚು ಚಳಿ ಇರುವುದನ್ನು ಗುರುತಿಸಲಾಗಿದೆ. ಆಗಾಗ ಹಿಮದಿಂದ ಕೂಡಿದ ಮಳೆಯಾಗುತ್ತದೆ. ಒಟ್ಟಿನಲ್ಲಿ ವರ್ಷದಲ್ಲಿ 719ಮಿಮೀ ವರೆಗೆ ಮಳೆಯಾಗುತ್ತದೆ.

	ಸಸ್ಯ ಮತ್ತು ಪ್ರಾಣಿಗಳು: ಉತ್ತರ ಮತ್ತು ಪೂರ್ವದಲ್ಲಿ ಕೋನಿಫರಸ್ ಕಾಡುಗಳು, ಪಶ್ಚಿಮ ಮತ್ತು ದಕ್ಷಿಣದಲ್ಲಿ ಪ್ರೇರಿ ಹುಲ್ಲುಗಾವಲು ಕಂಡುಬರುತ್ತದೆ. ಪೈನ್ ಜಾತಿ ಮರಗಳು ಹೇರಳವಾಗಿವೆ.

	ಜಿಂಕೆ, ಕಡವೆ, ಕರಡಿ, ನರಿ, ಗೊಫರ್ ಮುಂತಾದ ಪ್ರಾಣಿಗಳಿವೆ. ಅನೇಕ ವಿಧದ ಪಕ್ಷಿಗಳು ಕಂಡುಬರುತ್ತವೆ. ಸರೋವರ ಮತ್ತು ನದಿಗಳಲ್ಲಿ ಹೇರಳವಾಗಿ ಮೀನುಗಳುಂಟು. ವರ್ಷದಲ್ಲಿ ಸುಮಾರು 1.5 ಮಿಲಿಯನ್ ಡಾಲರುಗಳಷ್ಟು ಮೌಲ್ಯದ ಮೀನುಗಳನ್ನು ಹಿಡಿಯುತ್ತಾರೆ.

	ಕೃಷಿ: ವ್ಯವಸಾಯದಲ್ಲಿ ಈ ರಾಜ್ಯದ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 5ನೆಯ ಸ್ಥಾನ ಪಡೆದಿದೆ. ಹಿಮನದಿಗಳಿಂದುಂಟಾದ ಫಲವತ್ತಾದ ನೆರೆ ಮಣ್ಣಿನಿಂದ ಕೂಡಿದ್ದು ವ್ಯವಸಾಯಕ್ಕೆ ಯೋಗ್ಯವಾಗಿದೆ. ಬಾರ್ಲಿ, ಗೋದಿ, ಕಾಳುಗಳು, ಆಲೂಗಡ್ಡೆ. ಸೋಯಬೀನ್ ಮತ್ತು ಹೊಗೆಸೊಪ್ಪು ಮೊದಲಾದವನ್ನು ಬೆಳೆಯುತ್ತಾರೆ. ಹಾಲು, ಬೆಣ್ಣೆ, ಗಿಣ್ಣು ಮತ್ತು ಹಾಲಿನಪುಡಿ ಉತ್ಪತ್ತಿಯಲ್ಲಿ ಈ ರಾಜ್ಯ ಹೆಸರು ಪಡೆದಿದೆ. ಇಲ್ಲಿ ಬೆಳೆಯುವ ವಿವಿಧ ಫಲಗಳಲ್ಲಿ ಸೇಬು ಮತ್ತು ದ್ರಾಕ್ಷಿ ಮುಖ್ಯವಾದವು.

	ಖನಿಜ:  ಮಿನಿಸೋಟ ಖನಿಜೋತ್ಪಾದನೆಯಲ್ಲಿ 10ನೆಯ ಸ್ಥಾನ ಪಡೆದಿದೆ. ಕಬ್ಬಿಣದ ಅದುರು ಇಲ್ಲಿಯ ಮುಖ್ಯ ಖನಿಜ. ಕಬ್ಬಿಣದ ಅದುರು ಮಿಸಾಜಿ ರೀಂಡ್‍ನಲ್ಲಿ ಹೇರಳವಾಗಿ ದೊರೆಯುತ್ತದೆ. ಮ್ಯಾಂಗನೀಸ್, ಗ್ರಾನೈಟ್, ಜೇಡಿಮಣ್ಣು ಇತರ ಮುಖ್ಯ ಖನಿಜಗಳು. ವರ್ಷದಲ್ಲಿ ಸುಮಾರು 600 ಮಿಲಿಯನ್ ಪೌಂಡ್‍ಗಳ ಮೌಲ್ಯದ ಖನಿಜೋತ್ಪತ್ತಿಯುಂಟು. ಸಂಯುಕ್ತಸಂಸ್ಥಾನದ ಕಬ್ಬಿಣದ ಅದುರಿನಲ್ಲಿ ⅔ಭಾಗ ಈ ರಾಜ್ಯ ಒಂದರಲ್ಲೇ ಉತ್ಪಾದಿಸಲಾಗುತ್ತದೆ. ಪ್ರಪಂಚದ ತೆರೆದ ದೊಡ್ಡ ಕಬ್ಬಿಣ ಗಣಿಪ್ರದೇಶಗಳಲ್ಲಿ ಈ ರಾಜ್ಯದ ಹಿಬ್ಬಿಂಗ್ ಬಳಿಯ ಗಣಿ ಪ್ರದೇಶವೂ ಒಂದು.

	ಕೈಗಾರಿಕೆಗಳು:  ಹಿಟ್ಟಿನ ಗಿರಣಿ ಇಲ್ಲಿಯ ಮುಖ್ಯ ಕೈಗಾರಿಕೆ. ಸೇಂಟ್‍ಪಾಲ್ ಮಾಂಸದ ತಯಾರಿಕೆಗೆ ಪ್ರಸಿದ್ಧಿಯಾಗಿದೆ. ಬೆಣ್ಣೆ, ಹಾಲು, ಹಾಲಿನಪುಡಿ ಮತ್ತು ಗಿಣ್ಣು ಹೇರಳವಾಗಿ ಉತ್ಪಾದಿಸುತ್ತಾರೆ. ಮುದ್ರಣ, ಬಣ್ಣದ ತಯಾರಿಕೆ ಇತರ ಮುಖ್ಯ ಕೈಗಾರಿಕೆಗಳು. 1982ರಲ್ಲಿ ವಿವಿಧ ಕಾರ್ಖಾನೆಗಳಲ್ಲಿ 3,59,600 ಮಂದಿ ಕಾರ್ಮಿಕರಿದ್ದು ಕೈಗಾರಿಕಾ ಸಿದ್ಧವಸ್ತುಗಳ ಬೆಲೆ 14,305 ಮಿಲಿಯನ್ ಡಾಲರುಗಳಾಗಿದ್ದುವು. ಮಿನಿಸೋಟದ ಒಟ್ಟು ವಿಸ್ತೀರ್ಣದಲ್ಲಿ 40ಭಾಗ ಕಾಡಿನಿಂದ ಕೂಡಿದ್ದು ಈ ರಾಜ್ಯ ಅರಣ್ಯೋತ್ಪನ್ನಗಳ ಕೈಗಾರಿಕೆಗಳಿಗೆ ಪ್ರಾಮುಖ್ಯ ಪಡೆದಿದೆ. ವ್ಯವಸಾಯದ ಯಂತ್ರೋಪಕರಣಗಳ ಉತ್ಪಾದನೆಯಲ್ಲಿ 2ನೆಯ ಸ್ಥಾನ ಪಡೆದಿದೆ.

	ಸಂಪರ್ಕ ಸಾಧನಗಳು: ಮಿನಿಸೋಟ ಅನೇಕ ನದಿ ಮತ್ತು ಸರೋವರಗಳಿಂದ ಕೂಡಿದ್ದು ಜಲಮಾರ್ಗದ ಅನುಕೂಲ ಪಡೆದಿದೆ. ಡಲೂತ್ ಮತ್ತು ಸುಪೀರಿಯರ್ ಇಲ್ಲಿಯ ಮುಖ್ಯ ಬಂದರುಗಳಾಗಿದ್ದು ಇವುಗಳ ಮುಖಾಂತರ ಕಬ್ಬಿಣದ ಅದುರು ಮತ್ತು ಇತರ ವಸ್ತುಗಳ ಸಾಗಾಣಿಕೆಗೆ ಅನುಕೂಲಗಳಿವೆ. ಆಗ್ನೇಯಕ್ಕೆ ಸೇಂಟ್‍ಪಾಲ್ ಮತ್ತು ಮಿನಿಪೋಲಿಸ್, ಈಶಾನ್ಯಕ್ಕೆ ಡಲೂತ್‍ನಲ್ಲಿ ಅನೇಕ ರೈಲು ಮಾರ್ಗಗಳಿವೆ. ಮಿನಿಸೋಟ ಅನೇಕ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಪಡೆದಿದೆ. ಈ ರಾಜ್ಯದ ಪ್ರಮುಖ ಪಟ್ಟಣಗಳಾದ ಮಿನಿಪೋಲಿಸ್, ಡಲೂತ್, ಸೇಂಟ್ ಪಾಲ್ ಮತ್ತು ರೊಚೆಸ್ಟರ್‍ಗಳಿಗೆ ವಾಯುಮಾರ್ಗಗಳಿವೆ.

	ವಿದ್ಯಾಭ್ಯಾಸ:  ಶಾಲೆಗಳ ಆಡಳಿತ 5 ವರ್ಷಗಳ ಅವಧಿಗೆ ರಾಜ್ಯಪಾಲರಿಂದ ನೇಮಿಸಲ್ಪಡುವ 5 ಮಂದಿ ಸದಸ್ಯರುಗಳಿಂದ ನಿರ್ವಹಿಸಲ್ಪಡುತ್ತದೆ. ಒಬ್ಬ ಶಿಕ್ಷಣಾಧಿಕಾರಿ (ಕಮಿಷನರ್) ಇರುತ್ತಾನೆ. ರಾಜ್ಯದ ಅನೇಕ ಕಡೆಗಳಲ್ಲಿ ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆಗಳಿವೆ. ಅನೇಕ ಉತ್ತಮ ಗ್ರಂಥಾಲಯಗಳಿವೆ. ಮಿನಿಸೋಟ ವಿಶ್ವವಿದ್ಯಾಲಯ ಈ ರಾಜ್ಯದ ಪ್ರಮುಖ ಉನ್ನತ ವಿದ್ಯಾಸಂಸ್ಥೆ. ಇದು 1851ರ್ಲಲಿ ಮಿನಿಪೋಲಿಸ್‍ನಲ್ಲಿ ಸ್ಥಾಪಿತವಾಯಿತು. ಈ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ, ಕಲೆ, ಸಾಹಿತ್ಯ, ನ್ಯಾಯ. ಕೃಷಿವಿಜ್ಞಾನ, ಲಲಿತಕಲೆ ಇವುಗಳ ವಿಷಯದಲ್ಲಿ ಬೋಧನೆ ಮತ್ತು ಸಂಶೋಧನೆಗೆ ಅವಕಾಶವಿದೆ. 1983ರಲ್ಲಿ 1504 ಸಾರ್ವಜನಿಕ ಶಾಲೆಗಳೂ 603 ಖಾಸಗಿ ಶಾಲೆಗಳೂ 7 ರಾಜ್ಯ ವಿಶ್ವವಿದ್ಯಾಲಯಗಳೂ ಇದ್ದವು.

	ಸಾರ್ವಜನಿಕ ಯೋಗಕ್ಷೇಮ: ರಾಜ್ಯದ ಸಾಮಾಜಿಕ ಭದ್ರತಾ ಇಲಾಖೆ ಸಾರ್ವಜನಿಕ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ. ಅನೇಕ ಸಾರ್ವಜನಿಕ ಆಸ್ಪತ್ರೆಗಳೂ ಕಿವುಡು ಮೂಗರ ಶಾಲೆಗಳೂ ಮಕ್ಕಳು ಮತ್ತು ವಯಸ್ಸಾದವರ ಯೋಗಕ್ಷೇಮ ನೋಡಿಕೊಳ್ಳುವ ಅನೇಕ ಕೇಂದ್ರಗಳೂ ಇವೆ.

	ಮಿನಿಸೋಟದಲ್ಲಿ ಹಲವಾರು ಸರೋವರಗಳೂ ಅನೇಕ ಪ್ರೇಕ್ಷಣೀಯ ಸ್ಥಳಗಳೂ ಇವೆ. ಮಿನಿಸೋಟ ಆರೋಹೆಡ್ ಮುಖ್ಯ ಪ್ರೇಕ್ಷಣೀಯ ಸ್ಥಳ. ಮಿನೆಹಹ ಮತ್ತು ಸೇಂಟ್ ಆಂತೋನಿ ಇಲ್ಲಿಯ ಮುಖ್ಯ ಜಲಪಾತಗಳು. ಇಟಾಸ್ಕ, ಲೆಂಡ್ಬಗ್, ಪೋರ್ಟ್‍ರಿಡ್ಲ್ ಇಲ್ಲಿಯ ಮುಖ್ಯ ರಾಷ್ಟ್ರೀಯ ಉದ್ಯಾನಗಳು.

	ಆಡಳಿತ: 1858ರಲ್ಲಿ ಅಂಗೀಕರಿಸಿದ ಸಂವಿಧಾನದ ಮೇಲೆ ಈಗಿನ ಮಿನಿಸೋಟ ಆಡಳಿತ ನಿಂತಿದೆ. ಈ ರಾಜ್ಯವನ್ನು 67 ವಿಭಾಗಗಳಾಗಿ ವಿಂಗಡಿಸಿ ಪ್ರತಿಯೊಂದರಿಂದ ಒಬ್ಬೊಬ್ಬ ಸೆನೆಟರನ್ನು ಆರಿಸಲಾಗುತ್ತದೆ. ರಾಜ್ಯ ವಿಧಾನಸಭೆ 4 ವರ್ಷಗಳ ಅಧಿಕಾರಾವಧಿಯ 67 ಮಂದಿ ಸೆನೆಟರಿಂದ ಮತ್ತು 2 ವರ್ಷಗಳ ಅಧಿಕಾರಾವಧಿಯ 134 ಮಂದಿ ಪ್ರಜಾಪ್ರತಿನಿಧಿಗಳಿಂದ ಕೂಡಿದೆ. ರಾಜ್ಯದ ಮುಖ್ಯ ಕಾರ್ಯಾಂಗದ ಅಧಿಕಾರಗಳೆಂದರೆ ಗೌರ್ನರ್, ಲೆಫ್ಟಿನೆಂಟ್ ಗೌರ್ನರ್, ಕಾರ್ಯದರ್ಶಿ, ಖಜಾಂಚಿ ಹಾಗೂ ಅಟಾರ್ನಿ ಜನರಲ್, ರಿಪಬ್ಲಿಕನ್, ಡೆಮೊಕ್ರಾಟಿಕ್ ಮತ್ತು ರೈತ ಕಾರ್ಮಿಕ ಪಕ್ಷಗಳು ಇಲ್ಲಿಯ ಮುಖ್ಯ ರಾಜಕೀಯ ಪಕ್ಷಗಳು. ಮಿನಿಸೋಟದ ನ್ಯಾಯಾಂಗ ಶ್ರೇಷ್ಠ ನ್ಯಾಯಾಲಯ ಮತ್ತು ಜಿಲ್ಲಾ, ಪ್ರೊಬೇಟ್ ಮತ್ತು ಪುರಸಭಾ ನ್ಯಾಯಾಲಯಗಳಿಂದ ಕೂಡಿದೆ.

	ಇತಿಹಾಸ:  ಸಿಯೋಕ್ಸ್ ಇಂಡಿಯನ್ಸ್ ಉತ್ತರ ಮತ್ತು ಈಶಾನ್ಯದಲ್ಲಿ ವಾಸಿಸುವ ಪ್ರಮುಖ ಜನಾಂಗ. ಫ್ರಾನ್ಸ್, ಇಂಗ್ಲೆಂಡ್, ಸ್ಕಾಟಿಷ್, ಸ್ವಿಟ್‍ಜóರ್‍ಲೆಂಡ್ ಮತ್ತು ಫ್ರೆಂಚ್ ಕೆನಡಿಯನ್ನರು ಮಿನಿಸೋಟಕ್ಕೆ ವಲಸೆ ಬಂದವರು. ಫ್ರಾನ್ಸ್ ಪ್ರಭುತ್ವ ಸುಮಾರು ಒಂದು ಶತಮಾನದ ತನಕವೂ ಇದ್ದು 1763ರಲ್ಲಿ ಕೊನೆಗೊಂಡಿತು. ಅನಂತರ ಆಂಗ್ಲರ ಪ್ರಭುತ್ವ ಶುರುವಾಯಿತು. 1783ರಲ್ಲಿ ಆಂಗ್ಲರಿಂದ ಈ ರಾಜ್ಯ ಅಮೆರಿಕ ಸಂಯುಕ್ತ ಸಂಸ್ಥಾನದ ಆಳ್ವಿಕೆಗೆ ಒಳಪಟ್ಟಿತು. 1858ಮೇ 11ರಂದು 32ನೆಯ ರಾಜ್ಯರಾಗಿ ಮಿನಿಸೋಟ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೇರಿಹೋಯಿತು.
(ಎಂ.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ